ನಮ್ಮ ಬಗ್ಗೆ

ಲಿನಕ್ಸಾಯಣ

ಮೊದಲ ನುಡಿ

ಲಿನಕ್ಸಾಯಣ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಜಗತ್ತಿಗೆ ಒಂದು ಸಣ್ಣ ಪರಿಚಯ. ಕಂಪ್ಯೂಟರ್ ಕೊಳ್ಳುವುದರಿಂದ ಹಿಡಿದು, ಅದನ್ನು ಕಾರ್ಯನಿರ್ವಹಿಸುವಂತೆ ಮಾಡಲು ಬೇಕಿರುವ ತಂತ್ರಾಂಶಗಳನ್ನು ಪಡೆದು, ಸ್ವತ: ನೀವೇ ದಿನಂಪ್ರತಿ ಕಂಪ್ಯೂಟರ್ ಅನ್ನು ಬಳಸುವಂತಾಗಿಸುವುದೇ ಇದರ ಮೊದಲ ಗುರಿ.

ರಾಕೆಟ್ ವೇಗದಲ್ಲಿ ನುಗ್ಗುತ್ತಿರುವ ತಂತ್ರಜ್ಞಾನದ ದಿನಗಳ ಈ ಕಾಲದಲ್ಲಿ, ಸ್ವತಂತ್ರ ತಂತ್ರಾಂಶಗಳು ಅಗ್ಗದ ಕಂಪ್ಯೂಟರ್ ಗಳ ಜೊತೆ ಲೆಕ್ಕಮಾಡಲು ಬೇಕಿರುವ ಕ್ಯಾಲ್ಕುಲೇಟರ್ ಗಳಿಂದ ಹಿಡಿದು ಅಂತರಿಕ್ಷದಲ್ಲಿ ಹಾರಾಡುವ ಮಾನವನಿಗೂ ಬೇಕಿರುವ ಎಲ್ಲವನ್ನೂ ನಮ್ಮೆಲ್ಲರ ಕೈಗೆಟುಕುವಂತೆ ಮಾಡಿವೆ. ಈ ರೀತಿಯ ತಂತ್ರಜ್ಞಾನ ಮಾನವನ ಒಳಿತಿಗೆ ಇದ್ದು, ಮುಕ್ತವಾಗಿ ಅದರ ಉಪಯೋಗ ಎಲ್ಲರಿಗೂ ಆಗಬೇಕು, ಜೊತೆಗೆ ಅದನ್ನು ತನ್ನ ಹಾಗೂ ಮುಂದಿನ ಪೀಳಿಗೆಯ ಜೊತೆ ಹಂಚಿಕೊಂಡು, ಬಳಸಿ, ಅಭಿವೃದ್ದಿಗೊಳಿಸಿ ಎಂದಿಗೂ ಅದನ್ನು ಸ್ವತಂತ್ರವಾಗಿಯೇ ಇರಿಸಿಕೊಳ್ಳಬೇಕು ಎಂಬುದು ಸ್ವತಂತ್ರ ತಂತ್ರಾಂಶದ ಮುಖ್ಯ ಧ್ಯೇಯೋದ್ದೇಶ. ಇದರ ಇತಿಹಾಸ, ವರ್ತಮಾನ ಹಾಗು ಭವಿಷ್ಯದ ವಿಷಯಗಳನ್ನೂ ಲಿನಕ್ಸಾಯಣ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.

ಯಾವುದೇ ಒಂದು ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ನಮಗೆ ಒಗ್ಗಿ ಬರಬೇಕಾದರೆ ಅದನ್ನು ನಾವು ಬಳಸಿ ನೋಡಿದಾಗಲೇ ಸಾಧ್ಯ. ಈ ನಿಟ್ಟಿನಲ್ಲಿ ಲಿನಕ್ಸಾಯಣ ನಿಮಗೆ ಪ್ರಾತ್ಯಕ್ಷಿಕೆಗಳ ಮೂಲಕ, ದೃಶ್ಯ, ಶ್ರಾವ್ಯ, ಲೇಖನ, ಟಿಪ್ಪಣಿ, ಪ್ರಶ್ಯಾವಳಿ ಇತ್ಯಾದಿಗಳ ಮೂಲಕ ಪ್ರಾಥಮಿಕ ಮಟ್ಟದ ತಿಳುವಳಿಕೆಯನ್ನು ಅನುಭವದ ಸಾರ ಹಂಚಿಕೊಳ್ಳುತ್ತಾ ತಿಳಿಸಿ ಕೊಡುತ್ತದೆ. ಟಕ್ನಾಲಜಿಯ ಬಗೆಗಿನ ಅರಿವಿನ ಚಿಂತೆ ಬಿಟ್ಟು, ನಮ್ಮ ಲೇಖನಗಳ ಮೂಲಕ ನೀವೂ ಟೆಕಿಗಳ ಗುಂಪಿಗೆ ನಿಮ್ಮನ್ನು ನೀವು ಸೇರಿಸಿಕೊಳ್ಳುವಂತೆ ಮಾಡುವ ಕನಸನ್ನು ನಾವು ಹೊತ್ತಿದ್ದೇವೆ.

ಮೊದಲ ಹಂತದಲ್ಲಿ, ಲಿನಕ್ಸಾಯಣ ಕಂಪ್ಯೂಟರ್ ಬಳಕೆಗೊತ್ತಿರದ, ಸ್ವತಂತ್ರ ತಂತ್ರಾಂಶದ ಬಗ್ಗೆ ತಿಳಿಯದವರಿಗೆ ಅರಿವನ್ನು ಮೂಡಿಸುತ್ತದೆ. ನಂತರ ಲಿನಕ್ಸ್ ಇನ್ಸ್ಟಾಲೇಷನ್ ನಿಂದ ಹಿಡಿದು, ಕಂಪ್ಯೂಟರ್ ನಿರ್ವಹಣೆ, ಸಂರಕ್ಷಣೆ, ಸುರಕ್ಷತೆ  ಹೀಗೆ ಹತ್ತು ಹಲವು ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಬಗೆಗಿನ ಒಳಗುಟ್ಟುಗಳನ್ನು ನಿಮ್ಮೆದುರಿಗೆ ಇಡುತ್ತದೆ. ಪೂರ್ಣ ಪ್ರಮಾಣದ ಎಲ್ಲ ಉತ್ತರಗಳೂ ಇಲ್ಲಿ ನಿಮಗೆ ದೊರೆಯದಿದ್ದರೂ, ಸಾಮಾನ್ಯ ಜ್ಞಾನದ ಜೊತೆ, ನೀವು ಮನೆಯಲ್ಲಿ, ಕೆಲಸದಲ್ಲಿ, ಇಂಟರ್ವ್ಯೂಗಳಲ್ಲಿ, ಇತರೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಎದುರಿಸ ಬಹುದಾದ ತಂತ್ರಜ್ಞಾನ ಸಂಬಂದೀ ಪ್ರಶ್ನೆಗಳಿಗೆ ಉತ್ತರವನ್ನು ನೀವೇ ಹೇಗೆ ಕಂಡುಕೊಳ್ಳಬಹುದು ಎಂಬ ಹಾದಿಯನ್ನು ತೋರಿಸಲು ಪ್ರಯತ್ನಿಸುತ್ತದೆ.

ಕಬ್ಬಿಣದ ಕಡಲೆ ಎಂದು ಎಲ್ಲರೂ ಗ್ನು/ಲಿನಕ್ಸ್ ತಂತ್ರಜ್ಞಾನಗಳಿಂದ ದೂರ ಸರಿಯುತ್ತಾರೆ. ಆದರೆ ಇದೇ ತಂತ್ರಾಂಶ ಇಂದು ನಮ್ಮೆಲ್ಲರ ಜೀವನದ ಅಂಗವಾಗಿದೆ. ಮೊಬೈಲ್ ಗಳು, ಬ್ಯಾಂಕ್ ಏ.ಟಿ.ಏಂ, ಸರ್ವರ್ಗಳಿಂದ ಹಿಡಿದು ಅತಿ ಅಗಾಧ ಪ್ರಮಾಣದ ಕ್ಲಿಷ್ಟ ವಿಷಯಗಳನ್ನು ಬಗೆಹರಿಸಲೆಂದೇ ಇರುವ ಸೂಪರ್ ಕಂಪ್ಯೂಟರ್ ಗಳವರೆಗೆ ಎಲ್ಲವೂ ಸ್ವತಂತ್ರ ಅಥವಾ ಮುಕ್ತ ತಂತ್ರಾಂಶಗಳನ್ನು ಬಳಸುತ್ತವೆ. ಇದನ್ನು ಕನ್ನಡಿಗರಿಗೆ ತಿಳಿಸಿ ಹೇಳಲು, ಇಂದಿನ ಮಾಹಿತಿ ತಂತ್ರಜ್ಞಾನದಲ್ಲಿ ಸ್ವತಂತ್ರ ತಂತ್ರಾಂಶದ ಸುತ್ತಮುತ್ತಲಿನ ಬೆಳವಣಿಗೆ ಇತ್ಯಾದಿಗಳ ಬಗ್ಗೆ ಅರಿವನ್ನು ಮೂಡಿಸಲು ಲಿನಕ್ಸಾಯಣ ದ ಲೇಖನಗಳು ಸಹಾಯಕವಾಗಲಿವೆ.

ಯಾರು ಬಳಸಬಹುದು?

ಕಂಪ್ಯೂಟರ್ ಬಳಸ ಬೇಕು, ಲಿನಕ್ಸ್, ಸ್ವತಂತ್ರ ತಂತ್ರಾಂಶದ ಬಗ್ಗೆ ತಿಳಿಯಬೇಕು, ಅವನ್ನು ಉಪಯೋಗಿಸಿ ನಾನೂ ಕಂಪ್ಯೂಟರ್ ನ ಬಳಕೆದಾರನೆಂದು ಕರೆಸಿಕೊಳ್ಳಬೇಕು, ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅನೇಕ ಕಂಪೆನಿಗಳು ಉದ್ಯೋಗವಕಾಶ ನೀಡುತ್ತಿರುವಾಗ ಅದರ ಕೆಲವೊಂದಾದರೂ ತಂತ್ರಾಂಶಗಳನ್ನು ನಾನೂ ಉಪಯೋಗಿಸುವುದನ್ನು ಕಲಿತು, ತಂತ್ರಜ್ಞಾನದ ಅಭಿವೃದ್ದಿ, ನಿರ್ವಹಣೆ, ಇತ್ಯಾದಿಗಳಲ್ಲಿ ಮೊದಲ ಹೆಜ್ಜೆ ಇಡಬೇಕು ಎನ್ನುವವರಿಗೆ, ಶಾಲೆ, ಕಾಲೇಜುಗಳಲ್ಲಿ ಗ್ನು/ಲಿನಕ್ಸ್ ಬಗೆಗಿನ ಅರಿವು ಮೂಡಿಸಲು, ಸ್ವತಂತ್ರ ತಂತ್ರಾಂಶವನ್ನು ದೈನಂದಿನ ಬದುಕು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಅಳವಡಿಸಿಕೊಳ್ಳಲು ಕೈಪಿಡಿಯಾಗಿ ಹೀಗೆ ಹತ್ತು ಹಲವು ಯೋಚನೆಗಳಿರುವ ಎಲ್ಲರೂ ಓದಬಹುದು.

ಸೂಚನೆ: ಲಿನಕ್ಸಾಯಣದ ಲೇಖನಗಳನ್ನು ನಿಮ್ಮ ಉಪಯೋಗಕ್ಕೆ ಬಳಸುವ ಮೊದಲು, ಅದರ ಪರವಾನಗಿ ಪುಟವನೊಮ್ಮೆ ಓದಿ.

Follow linuxayana on Twitter

ಲೇಖಕರ ಪರಿಚಯ

ಓಂಶಿವಪ್ರಕಾಶ್ ಎಚ್. ಎಲ್

ನಾನೊಬ್ಬ ಹೆಮ್ಮೆಯ ಕನ್ನಡಿಗ. ವೃತ್ತಿಯಿಂದ ತಾಂತ್ರಿಕ ನಿರ್ವಾಹಕ, ಪ್ರವೃತ್ತಿಯಿಂದ ಬರಹಗಾರ, ಬ್ಲಾಗಿಗ, ಛಾಯಾಚಿತ್ರಕಾರ, ನನ್ ಮನ ದಲ್ಲಿನ ನನ್ನ ನಾಲ್ಕು ಸಾಲುಗಳನ್ನು ನೀವು ಮೆಚ್ಚುವುದಾದರೆ ಉದಯೋನ್ಮುಕ ಕವಿ, ಹ್ಯಾಕರ್. ವಿಜ್ಞಾನ, ತಂತ್ರಜ್ಞಾನದ ವಿಷಯದಲ್ಲಿ ಪೂರ್ಣಚಂದ್ರ ತೇಜಸ್ವಿ, ನಾಗೇಶ್ ಹೆಗಡೆ ನನ್ನ ಆದರ್ಶ ಬರಹಗಾರರು.

ನನ್ನ ಇಂಗ್ಲೀಷ್ ಬ್ಲಾಗ್ ಪ್ಲೇಟೋನಿಕ್ ಗೊಮ್ಮೆ ಭೇಟಿ ಕೊಡಿ.

ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ಚಿತ್ರಗಳು ಇಲ್ಲಿವೆ.

Follow omshivaprakash on Twitter

Share This