ಲಿನಕ್ಸಾಯಣ -೪- ಬಯೋಸ್ (BIOS)

by | Sep 19, 2010 | ಸಾಮಾನ್ಯ ಜ್ಞಾನ | 0 comments

ಉಬುಂಟು ಸಿ.ಡಿ ನಿಮಗೆ ಸಿಕ್ತಾ? ನಿಮ್ಮ ಕಂಪ್ಯೂಟರಿನಿಲ್ಲಿ ಉಪಯೋಗಿಸಲಿಕ್ಕೆ ಸಾದ್ಯ ಆಯ್ತಾ? ಬಹಳಷ್ಟು ಜನರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಲ್ವೇ? ಲಿನಕ್ಸ ಸಿ.ಡಿ ಯನ್ನೇನೊ ಉಪಯೋಗಿಸಿ ಕಂಪ್ಯೂಟರ್ ಚಾಲನೆ ಮಾಡ್ಲಿಕ್ಕೇನೋ ಹೇಳಿದ್ದೆ. ಆದ್ರೆ ಹ್ಯಾಗೆ ಅಂತ ಹೇಳಲಿಲ್ಲ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ.

ಸಿ.ಡಿ ಉಪಯೋಗಿಸೋದು ಹೇಗೆ ಅಂತ ತಿಳಿದುಕೊಳ್ಳೊ ಮೊದಲು ನಮ್ಮ ಕಂಪ್ಯೂಟರ್ ಪವರ್ ಬಟನ್ ಅದುಮಿದಾಕ್ಷಣ ಹ್ಯಾಗೆ ಕೆಲಸ ಮಾಡ್ಲಿಕ್ಕೆ ಶುರು ಮಾಡತ್ತೆ ಅನ್ನೋದು ನಿಮಗೆ ತಿಳಿದಿರಬೇಕು.
ನಿಮ್ಮ ಕಂಪ್ಯೂಟರಿನ ಮುಟ್ಟಿ ನೋಡ ಬಹುದಾದ ಎಲ್ಲ ಭಾಗಗಳು (physical parts) ಹಾರ್ಡ್ವೇರ್ ವಸ್ತುಗಳು. ಅಂದ್ರೆ ಸಿ.ಪಿಯು ಬಾಕ್ಸ್ (ಮದರ್ ಬೋರ್ಡ್, ಪ್ರಾಸೆಸರ್, ಪ್ಲಾಪಿ ಡಿಸ್ಕ್, ಸಿ.ಡಿ/ಡಿ.ವಿ.ಡಿ, ಹಾರ್ಡ್ ಡಿಸ್ಕ್, ಮೆಮೊರಿ, ವಿಡಿಯೋ ಕಾರ್ಡ್, ಆಡಿಯೋ ಕಾರ್ಡ್, ನೆಟ್ವರ್ಕ್ ಕಾರ್ಡ್ ಇತ್ಯಾದಿ ಇರೋ ಬಾಕ್ಸ್, ಇದಕ್ಕೇ ನಿಮ್ಮ ಇತರೆ ಹಾರ್ಡ್ವೇರ್ ಗಳು ಜೋಡಣೆಯಾಗೋದು.), ಮೌಸ್, ಕೀಬೋರ್ಡ್, ಮಾನೀಟರ್, ಪ್ರಿಂಟರ್ ಇತ್ಯಾದಿ. ಪವರ್ ಬಟನ್ ಅದುಮಿದಾಕ್ಷಣ ಇವೆಲ್ಲಾ ಒಂದಕ್ಕೊಂದು ಮಾತಾಡ್ಕೊಂಡು ಕೆಲಸ ಮಾಡ್ಲಿಕ್ಕೆ ತಯಾರಾಗ್ತವೆ ಅಲ್ವೇ? ಇದಕ್ಕೆ ಕಾರಣ ಬಯೋಸ್.

ಬಯೋಸ್ (ಬೇಸಿಕ್ ಇನ್ಪುಟ್/ಔಟ್ಪುಟ್ ಸಿಸ್ಟಮ್ Basic Input/Output System) ಅನ್ನೋದು ನಿಮ್ಮ ಕಂಪ್ಯೂಟರ್ ಚಾಲನೆಯಾಗಿ ಕೆಲಸ ಮಾಡ್ಲಿಕ್ಕೆ ಬೇಕಾದ ಕೆಲವು ವಿದ್ಯುನ್ಮಾನ ಸಂಕೇತಗಳ (electronic instructions) ಒಂದು ಗುಂಪು. ಬಯೋಸ್ ನಿಮ್ಮ ಕಂಪ್ಯೂಟರಿನ ಮದರ್ ಬೋರ್ಡ್ ಒಳಗೆ ಒಂದು ಸಣ್ಣ ಸ್ಮೃತಿ ಕೊಶದಲ್ಲಿ (computer chip) ಅಡಗಿ ಕುಳಿತಿದೆ. ಇದು ನಿಮ್ಮ ಇತರೆ ಡ್ರೈವ್ ಗಳಿಗಿಂತ ಹೆಚ್ಚು ಕಾಲ ಉಳಿಯುವಂತೆ ತಯಾರಿಸಲಾಗಿದೆ.

ಬಯೋಸ್ ನ ಮುಖ್ಯ ಕೆಲಸ ಏನಪ್ಪಾ ಅಂತಂದ್ರೆ, ಪೋಸ್ಟ್ (POST – power-on self test) ಅನ್ನೋ ಪ್ರೊಗ್ರಾಮ್ ಗೆ ಸಂಕೇತಗಳನ್ನ ಕಳಿಸೋದು. ನೀವು ಕಂಪ್ಯೂಟರ್ ಅನ್ನ ಚಾಲನೆ ಮಾಡಿದ ತಕ್ಷಣ ಕಾಣೋ ಮೊದಲನೇ ಪ್ರೋಗ್ರಾಮ್ ಅಥವಾ ಕಪ್ಪು ಬಣ್ಣದ ಪರದೆಯಲ್ಲಿ ನೆಡೆಯೋ ಕೆಲಸ ಇದೇ. ಇದು ಕಂಪ್ಯೂಟರ್ ಸುಲಲಿತ ಚಾಲನೆಗೆ ತನ್ನಲ್ಲಿರಬೇಕಾದ ಎಲ್ಲ ಅಗತ್ಯ ಹಾರ್ಡ್ವೇಗಳು ಅಂದರೆ, ಮೆಮೊರಿ, ಕೀ ಬೋರ್ಡ್ ಇತರೆ. ಇವೆಯೇ ಇಲ್ಲವೇ ಅನ್ನೋದನ್ನ ತನ್ನಂತಾನೆ ಪರೀಕ್ಷಿಸಿ (ಸ್ವಪರೀಕ್ಷೆ) ಕೊಳ್ಳೋದಕ್ಕಿರೂ ಸಣ್ಣ ಪ್ರೊಗ್ರಾಮ್. ಹಾರ್ಡ್ವೇರ್ ಗಳಲ್ಲಿ ಏನಾದರೂ ತೊಂದರೆ ಇದ್ದರೆ, ಬಯೋಸ್ ಕಂಪ್ಯೂಟರ್ ಗೆ ಇದನ್ನ ನಮಗೆ ಅರ್ಥವಾಗುವಂತಹ ಸಂದೇಶವನ್ನ ನೀಡುವಂತೆ ಆದೇಶಿಸುತ್ತದೆ. ಈ ಸಂದೇಶಗಳು ನಿಮಗೆ “ಬೀಪ್ (BEEP)” ಗಳಿಂದ ಕೂಡಿದ ಸದ್ದಿನಂತೆ ಕೇಳಿ ಬರುತ್ತವೆ.

ಇದೇ ಬಯೋಸ್, ನಿಮ್ಮ ಕಂಪ್ಯೂಟರ್ ನ ನಿರ್ಣಾಯಕ ಅಂಗಗಳಾದ ಡ್ರೈವ್ ಗಳು, ಮೆಮೋರಿಗಳು ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡ್ಲಿಕ್ಕೆ ಬೇಕಾದ ಮೂಲ ಮಾಹಿತಿಯನ್ನ ಕಳಿಸ್ತದೆ. ಈ ಮೂಲ ಮಾಹಿತಿಗಳು ಮತ್ತು ಪೋಸ್ಟ್ ಪರೀಕ್ಷೆ ಮುಗಿದ ನಂತರ, ಆಪರೇಟಿಂಗ್ ಸಿಸ್ಟಂ ನಿಮ್ಮ ಕಂಪ್ಯೂಟರಿನ ಒಂದು ಡ್ರೈವ್ ನ ಮೂಲಕ ಲೋಡಾಗಲಿಕ್ಕೆ (ಚಾಲನೆಯಾಗ್ಲಿಕ್ಕೆ) ಶುರು ಮಾಡ್ತದೆ. ಇದೇ ನಮಗೆ ಬೇಕಿರೋ ಅಂಶ , ಉಬುಂಟು ಸಿ.ಡಿ ಯಿಂದ ಉಬುಂಟು ಎಂಬ ಆಪರೇಟಿಂಗ್ ಸಿಸ್ಟಂ ಚಾಲನೆ ಮಾಡ್ಲಿಕ್ಕೆ.

ಕಂಪ್ಯೂಟರಿನ ಬಳಕೆದಾರರಾದ ನಾವು, ಬಯೋಸನ್ನ ನಮಗೆ ಬೇಕಿರುವ ಡ್ರೈವ್ ನ ಮೂಲಕೆ ಆಪರೇಟಿಂಗ್ ಸಿಸ್ಟಂ ಅನ್ನ ಲೋಡ್ ಮಾಡೋ ಹಾಗೆ ತಯಾರು ಮಾಡ್ಕೋಬಹುದು. ಬಯೋಸ್ ನ ವಿನ್ಯಾಸ ಪರದೆ (configuration screen) ಮೂಲಕ ನಾವಿದನ್ನ ಸಾಧಿಸ ಬಹುದು. ಈ ಪರದೆಯನ್ನ “F10″ ಅಥವಾ “DEL” ಅನ್ನೋ ವಿಶೇಷ ಕೀ ಗಳನ್ನ ಕಂಪ್ಯೂಟರ್ ಚಾಲನೆ ಹಾಗ್ತಿದ್ದಂತೆಯೇ ಕೀಲಿಸುವುದರಿಂದ ಪ್ರವೇಶಿಸ ಬಹುದು. ನಿಮ್ಮ ಕಂಪ್ಯೂಟರಿನ ಕಂಪನಿಯವರು ನೀಡಿರುವ ಕೈಪಿಡಿ (manual) ನಿಮಗೆ ಈ “ವಿಶೇಷ ಕೀ” ಬಗ್ಗೆ ತಿಳಿಸ್ತದೆ. ಅಥವಾ POST ಪರದೆಯನ್ನ ನೀವು ಗಮನವಿಟ್ಟು ನೋಡಿದರೆ ನಿಮಗೆ ಇದರ ಮಾಹಿತಿ ಸಿಗ್ತದೆ. ನಿಮ್ಮ ಕಂಪ್ಯೂಟರ್ ನಿಮಗೆ ಇದನ್ನ ಓದಲಿಕ್ಕೆ ಸಾಕಷ್ಟು ಸಮಯ ನೀಡ್ತಿಲ್ಲ ಅಂತಾದ್ರೆ, “Tab” ಕೀ ಯನ್ನ ಕಂಪ್ಯೂಟರ್ ಚಾಲನೆ ಮಾಡಿದಾಕ್ಷಣ ಕೀಲಿಸಿ.

ನೀವು ಬಯೋಸ್ ನ ವಿನ್ಯಾಸ ಪರದೆಯನ್ನ ಪ್ರವೇಶಿಸಿದ ನಂತರ, ನೀವು ಮಾಡ್ಬೇಕಾದ ಮೊದಲ ಕೆಲಸ, ನಿಮ್ಮ ಸಿ.ಡಿ/ಡಿ.ವಿ.ಡಿ ಇಂದ ಆಪರೇಟಿಂಗ್ ಸಿಸ್ಟಂ ಶುರುವಾಗ ಬೇಕು ಅನ್ನೋ ನಿರ್ದೇಶನವನ್ನ ಬಯೋಸ್ ಗೆ ನೀಡೋದು. ಇದರ ಬಗ್ಗೆ ಕೂಡ ನಿಮಗೆ ಸಲಗೆ ಮೇಲೆ ಹೇಳಿದ ಕೈಪಿಡಿಯಲ್ಲಿ ಪಡೀ ಬಹುದು. ಇಲ್ಲಾಂದ್ರೆ, ಬಯೋಸ್ ನ ಪರದೆಯಲ್ಲಿರುವ ಅಂಶಗಳನ್ನ ಓದಿ ನೀವು “Boot Options” ಅನ್ನೋ ಒಂದು ವಿಭಾಗಕ್ಕೆ ಒಮ್ಮೆ ಬರ್ತೀರ. ಮೊದಲೇ ಹೇಳಿದ್ದೆನಲ್ಲಾ, ಸ್ವಲ್ಪ ಪರಿಶ್ರಮ ಪಡಿ ನಿಮಗೆ ನೀವೇ ಹೊಸದನ್ನ ಲಿನಕ್ಸ್ ಲೋಕದಲ್ಲಿ ಕಾಣ್ತೀರಂತ, ಇಲ್ಲಿಂದ ನಿಮ್ಮ ಹುಡುಕಾಟ ಆರಂಭ. ಹೆದರ ಬೇಡ್ರಿ. ನಾನಿದ್ದೇನೆ ಜೊತೆಗೆ. ನೀವೇನೋ ತಪ್ಪು ಮಾಡಿದ್ರಿ ಬಯೋಸ್ ನಲ್ಲಿ ಅಂತಾದ್ರೆ, “Esc” ಕೀ ಒತ್ತಿ ನೀವು ಮಾಡಿದ ಬದಲಾವಣೆಗಳನ್ನ ಬಯೋಸಿನಲ್ಲಿ ಉಳಿಸದೇ ಆಚೆ ಬನ್ನಿ. ಬೇರೆ ಬೇರೆ ಕಂಪ್ಯೂಟರಿನ ಬಯೋಸ್ ನಿಮಗೆ ಬೇರೆ ಬೇರೆ ತರ ಕಾಣಿಸ ಬಹುದು, ಇದು ಬಯೋಸ್ ನ ಆವೃತ್ತಿ (version) ಯನ್ನ ಆದರಿಸಿರುತ್ತದೆ ಅಥವಾ ನಿಮ್ಮ ಕಂಪ್ಯೂಟರ್ ಕಂಪನಿ ಉಪಯೋಗಿಸುತ್ತಿರುವ ಬಯೋಸ್ ಬೇರೆಯದಾಗಿರ ಬಹುದು. (ಅದಕ್ಕೇ ಕೈಪಿಡಿ ನಿಮ್ಮ ಜೊತೇಗಿದ್ರೆ ಒಳ್ಳೇದು) .

ಇತ್ತೀಚೆಗೆ ಬಯೋಸ್ ಪ್ಲಾಶ್-ಮೆಮೊರಿ ಎಂಬ ಚಿಪ್ (ಸ್ಮೃತಿ ಕೊಶ ) ನಲ್ಲಿ ಬರ್ತಿರೋದ್ರಿಂದ, ನಿಮ್ಮ ಕಂಪ್ಯೂಟರ್ ಕಂಪನಿ ಹೊಸ ಬಯೋಸ್ ಅನ್ನ ಬಿಡುಗಡೆ ಮಾಡಿದ್ರೆ ಅದನ್ನ ನಿಮ್ಮ ಬಯೋಸ್ ಚಿಪ್ಪಿನಲ್ಲೂ ಅಪ್ಡೇಟ್ (update) ಮಾಡ್ಕೊಳ್ಲಿಕ್ಕೆ ಸಾದ್ಯ ಆಗ್ತಿದೆ. ಇದರಿಂದ ಹಳೆ ಬಯೋಸ್ ನಲ್ಲಿರೋ ನ್ಯೂನ್ಯತೆಗಳನ್ನ ಸರಿ ಪಡಿಸ್ಲಿಕ್ಕೆ, ಇಲ್ಲ ಹೊಸ ಅಂಶಗಳನ್ನ ಸೇರಿಸ್ಲಿಕ್ಕೆ ಸಾಧ್ಯವಾಗ್ತಿದೆ. ಈ ಕ್ರಿಯೆ ನಿಮ್ಮ ಬಯೋಸ್ ನ ಆಯಸ್ಸನ್ನ ಹೆಚ್ಚಿಸಿ, ನಿಮ್ಮ ಹಾರ್ಡ್ವೇರ್ ಗಳು ಚೆನ್ನಾಗಿ ಕೆಲಸ ಮಾಡ್ಲಿಕ್ಕೆ ಸಹಾಯ ಮಾಡ್ತದೆ.

ಇದಷ್ಟೇ ಅಲ್ಲ ಇನ್ನು ಏನೇನೋ ಬದಲಾವಣೆಗಳನ್ನ ಬಯೋಸ್ ನಲ್ಲಿ ಮಾಡಬಹುದು. ಸದ್ಯಕ್ಕೆ ನಿಮಗಿಷ್ಟು ಸಾಕು. ನಿಮಗೆ ಉಬುಂಟು ಸಿ.ಡಿ ಉಪಯೋಗಿಸ್ಲಿಕ್ಕೆ ಬಯೋಸ್ ನಲ್ಲಿ ಏನ್ ಮಾಡ್ಬೇಕಂತ ಗೊತ್ತಾಯ್ತಲ್ಲ. ಮತ್ತೊಮ್ಮೆ, ಕಂಪ್ಯೂಟರ್ ಚಾಲನೆ ಮಾಡಿ, ಉಬುಂಟು ಸಿ.ಡಿ ಯನ್ನ ಆದಷ್ಟು ಬೇಗ ನಿಮ್ಮ ಸಿ.ಡಿ. ಡ್ರೈವ್ ಗೆ ನೀಡಿ. ಉಬುಂಟು ಲೋಡಾಗೊದನ್ನ ನೋಡ್ಲಿಕ್ಕೆ ಜ್ಯಾಸ್ತಿ ಸಮಯ ಹಿಡಿಲಿಕ್ಕಿಲ್ಲ.

ನಿಮಗೆ ಏನಾದರೂ ಸಂಶಯಗಳಿದ್ದರೆ, ಸಂಕೋಚವಿಲ್ಲದೆ ನನ್ನನ್ನ ಸಂಪರ್ಕಿಸಿ.

ಮುಂದಿನ ಸಂಚಿಕೆಯಲ್ಲಿ ನಿಮಗೇನ್ಬೇಕು ಅನ್ನೋದನ್ನ ನೀವೇ ತಿಳಿಸ್ತೀರಾ?

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This